ಲಿಂಗ ಸಮಾನತೆಯ ಹಾದಿಯಲ್ಲಿನ ಅನೇಕ ಅಡೆತಡೆಗಳನ್ನು ತೆಗೆದುಹಾಕಲಾಗಿದೆ, ಆದರೆ ಕೆಲವು ಇನ್ನೂ ಉಳಿದಿವೆ. ಮಹಿಳೆಯರ ಪ್ರತಿ ವಿಜಯವೂ ಹೋರಾಟದ ಫಲವೇ ಆಗಿದೆ. ಉನ್ನತ ಶಿಕ್ಷಣ ಮತ್ತು ಕೆಲಸದ ಅವಕಾಶಗಳ ಕಾರಣ ಅವರು ಇಂದು ಹೊರಗಿನ ಕೆಲಸ ಮತ್ತು ಮನೆಯನ್ನು ಸಮತೋಲನಗೊಳಿಸುವ ಕನಸು ಕಾಣುವಂತಾಗಿದೆ. ಆದರೆ ದಂಪತಿಗಳ ನಡುವೆ ಸಮಾನತೆ ಅನೇಕರಿಗೆ ಇನ್ನೂ ಮರೀಚಿಕೆ ಆಗಿದೆ. ಸಂತಾನೋತ್ಪತ್ತಿಯ ಹಕ್ಕುಗಳಿಗೆ ನಡೆಸಿರುವ ಹೋರಾಟವು ದೀರ್ಘವೂ ಕಠಿಣವೂ ಆಗಿದೆ. ಆದರೆ ಮಹಿಳೆಯರು ತಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತರಲು ಸರ್ಕಾರಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದಲ್ಲಿ, ಮಹಿಳೆಯರಿಗೆ ಮಾತೃತ್ವ ಸೌಲಭ್ಯಗಳನ್ನು ನೀಡಲು ೧೯೬೧ರಲ್ಲಿ ಸಂಸತ್ತು ಜಾರಿಗೊಳಿಸಿದ ಮಾತೃತ್ವ ಸೌಲಭ್ಯ ಕಾಯಿದೆಯನ್ನು (Maternity Benefits Act) ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ. ಉದಾಹರಣೆಗೆ, ವೇತನ ಸಹಿತ ಹೆರಿಗೆ ರಜೆಯನ್ನು ಹಿಂದಿನ ೧೨ ವಾರಗಳಿಂದ ೨೬ ವಾರಗಳಿಗೆ ವಿಸ್ತರಿಸಲಾಗಿದೆ. ಮುಟ್ಟಿನ ನೋವಿನ ರಜೆಯ ಬಗ್ಗೆ ಹೊಸ ನೀತಿ ರೂಪಿಸಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಸಂಪರ್ಕಿಸಲು ಅರ್ಜಿದಾರರಿಗೆ ಭಾರತದ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ನಿರ್ದೇಶನವನ್ನು ಈ ಹಿನ್ನೆಲೆಯಲ್ಲಿ ನೋಡಬೇಕಿದೆ. ಇದಕ್ಕೆ ವಿಭಿನ್ನ ಆಯಾಮಗಳಿವೆ ಎಂದು ಸೂಚಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಈ ಜೈವಿಕ ಪ್ರಕ್ರಿಯೆಯು ಮಹಿಳೆಯರಿಗೆ ಉದ್ಯೋಗ ನೀಡಲು ನಿರುತ್ಸಾಹ ಉಂಟು ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದಿದೆ. ಅರ್ಜಿದಾರರು ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ನೋವಿನ ರಜೆಯನ್ನು ನೀಡಲು ನಿಯಮಗಳನ್ನು ರೂಪಿಸಲು ರಾಜ್ಯಗಳಿಗೆ ನ್ಯಾಯಾಲಯದ ನಿರ್ದೇಶನವನ್ನು ಕೋರಿದ್ದರು. ಆದರೆ ಇದು ಈಗಾಗಲೇ ಅಸ್ತಿತ್ವದಲ್ಲಿರುವ ತಾರತಮ್ಯವನ್ನು ಹೆಚ್ಚಿಸಬಹುದು ಎಂಬ ಆತಂಕಗಳಿವೆ.
ಭಾರತದಲ್ಲಿ, ಕೇರಳ ಮತ್ತು ಬಿಹಾರದಲ್ಲಿ ಮುಟ್ಟಿನ ನೋವು ರಜೆ ಇದೆ. ಆಹಾರ ವಿತರಣಾ ಕಂಪೆನಿ ಝೊಮಾಟೊ ಇದನ್ನು ಅಮಲು ಮಾಡಿದೆ. ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ಸ್ಪೇನ್ ಮತ್ತು ಜಾಂಬಿಯಾ ದೇಶಗಳು ಇದನ್ನು ತಮ್ಮ ಕಾರ್ಮಿಕ ಕಾನೂನುಗಳಲ್ಲಿ ಸೇರಿಸಿವೆ. ಆದರೆ ಅನೇಕ ಸ್ತ್ರೀವಾದಿಗಳು ಈ ಕ್ರಮವು ನಕಾರಾತ್ಮಕ ಲಿಂಗ ಸಿದ್ಧ ಮಾದರಿಗಳನ್ನು ಬಲಪಡಿಸುತ್ತದೆ ಎಂದು ಆಕ್ಷೇಪಿಸಿದ್ದಾರೆ. ಆದರೆ ಭಾರತದಲ್ಲಿ ಶಾಲೆ ಮತ್ತು ಕೆಲಸದ ಸ್ಥಳಗಳಲ್ಲಿ, ವಿಶೇಷವಾಗಿ ಅನೌಪಚಾರಿಕ ವಲಯದಲ್ಲಿ ನೈರ್ಮಲ್ಯ ಸೌಲಭ್ಯಗಳ ಕೊರತೆಯಂತಹ ಇತರ ಸಮಸ್ಯೆಗಳನ್ನು ಪರಿಗಣಿಸಬೇಕಾಗಿದೆ. ೨೦೧೦ ಮತ್ತು ೨೦೨೦ ರ ನಡುವೆ ಕೆಲಸ ಮಾಡುವ ಮಹಿಳೆಯರ ಶೇಕಡಾವಾರು ಪ್ರಮಾಣವು ೨೬ ರಿಂದ ೧೯ಕ್ಕೆ ಕುಸಿದಿದೆ ಎಂದು ವಿಶ್ವಬ್ಯಾಂಕ್ ಅಂಕಿ ಸಂಖ್ಯೆಗಳು ತಿಳಿಸುತ್ತವೆ. ಹೆಚ್ಚಿನ ಮಹಿಳೆಯರು ಉದ್ಯೋಗಗಳಿಗೆ ಸೇರಲು ಪ್ರೋತ್ಸಾಹಿಸಲು, ಅವರಿಗೆ ಉನ್ನತ ಶಿಕ್ಷಣ ಪಡೆಯಲು ಮತ್ತು ಕೆಲಸ ಮಾಡಲು ಮುಕ್ತ ಅವಕಾಶಗಳಿರಬೇಕು.
ಕೆಲವೊಮ್ಮೆ ಶೌಚಾಲಯ ಇಲ್ಲ ಎಂಬ ಕಾರಣಕ್ಕೇ ಹೆಣ್ಣು ಮಕ್ಕಳು ಶಾಲೆ ಬಿಡಬೇಕಾಗುತ್ತದೆ. ಎಲ್ಲರ ಬದುಕೂ ಹಸನುಗೊಳಿಸಲು ಶ್ರಮಿಸಬೇಕಿರುವಾಗ, ಯಾವುದೇ ಒಂದು ವಲಯ ಹಿಂದೆ ಉಳಿಯದಂತೆ ನೋಡಿಕೊಳ್ಳುವುದು ಸಮಾಜ ಮತ್ತು ಸರ್ಕಾರಗಳ ಜವಾಬ್ದಾರಿಯಾಗಿದೆ. ಗುಣಮಟ್ಟದ ಜೀವನ ಕಟ್ಟಿಕೊಡಲು ಅನೇಕ ದೇಶಗಳು ವಾರದಲ್ಲಿ ನಾಲ್ಕು ದಿನಗಳು ಮಾತ್ರ ಕೆಲಸ ಮಾಡುವ ಪ್ರಯೋಗ ನಡೆಸುತ್ತಿವೆ. ಇತರರು ಪಿತೃತ್ವ ರಜೆಯನ್ನು ನೀಡುತ್ತಿದ್ದಾರೆ. ಇದು ಮಕ್ಕಳ ಪಾಲನೆ ಪೋಷಣೆಯನ್ನು ತಂದೆ ತಾಯಿ ಇಬ್ಬರೂ ಸಮನಾಗಿ ಹಂಚಿಕೊಳ್ಳುವುದನ್ನು ರೂಢಿ ಮಾಡುತ್ತದೆ ಮತ್ತು ಮಹಿಳೆಯರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದು ಅನಾನುಕೂಲ ಎಂದು ಬಗೆಯುವುದನ್ನು ಕಡಿಮೆ ಮಾಡುತ್ತದೆ. ಲಿಂಗ ಸಮಾನತೆಯ ಹಾದಿಯಲ್ಲಿರುವ ಎಲ್ಲಾ ಅಡೆ ತಡೆಗಳನ್ನು ತೊಡೆದುಹಾಕಬೇಕಿದೆ.
This editorial has been translated from English, which can be read here.
Published - February 27, 2023 10:00 am IST